ಜೀವದ ಉಗಮ -
ಜೀವದ ಉಗಮ ಹೇಗಾಯಿತೆಂಬುದನ್ನು ತಿಳಿಯುವ ಪ್ರಯತ್ನ ಮಾಡುವ ಮುನ್ನ ಜೀವ ಎಂದರೇನು ಎಂಬುದನ್ನು ಅರಿಯುವುದು ಅವಶ್ಯಕ. ಈ ಪ್ರಶ್ನೆಯನ್ನು ಉತ್ತರಿಸಲು ಬಹು ಹಿಂದಿನಿಂದಲೂ ಅನೇಕರು ಪ್ರಯತ್ನಿಸಿದ್ದಾರೆ. ಒಂದು ದ್ರವ್ಯದ ಮೂಲಧಾತುಗಳು ಘಟಕಗಳಾಗಿ ವ್ಯವಸ್ಥಿತಗೊಂಡಾಗ ಅದು ತೋರುವ ಒಂದು ವಿಶಿಷ್ಟ ರೀತಿಯ ಚಟುವಟಿಕೆಯೇ ಜೀವ. ಈ ಘಟಕಗಳಿಗೆ ಮುಂದೆ ಹೇಳಲಾಗುವ ಸಾಮಥ್ರ್ಯ ಉಂಟು: 1. ಆಹಾರ ಸೇವನೆ ಅಥವಾ ಸ್ವಾಂಗೀಕರಣದ ಮೂಲಕ ಬೇರೆ ಬಗೆಯ ದ್ರವ್ಯವನ್ನು ಬಳಸಿಕೊಂಡು ವೃದ್ಧಿಸುವುದು ಇಲ್ಲವೇ ಬೆಳೆಯುವುದು. 2. ತಮ್ಮಿಂದ ಬೇರೆಯಾದ ಹೊಸ ಘಟಕಗಳನ್ನು ಉತ್ಪಾದಿಸುವುದು-ಈ ಪ್ರತಿಕ್ರಿಯೆಗೆ ಪ್ರಜನನ ಎಂದು ಹೆಸರು. ಈ ಹೊಸ ಘಟಕಗಳು ಕೂಡ ಮೇಲೆ ಹೇಳಿದ ಗುಣಗಳನ್ನೇ ಪ್ರದರ್ಶಿಸುತ್ತವೆ. ಈ ವಿವರಣೆಯಲ್ಲಿ ಯಾವ ದಿವ್ಯ ಚೇತನದ ಅಥವಾ ಇನ್ನಾವುದೇ ಬಗೆಯ ಅತೀಂದ್ರಿಯ ಶಕ್ತಿಯ ಕೈವಾಡ ಇಲ್ಲವಾದರೂ ಅಂಥ ನಂಬಿಕೆಯನ್ನು ಇದು ಅಲ್ಲಗಳೆಯುವುದಿಲ್ಲ. ಆದರೆ ಹರಳುಗಳ ಬೆಳವಣಿಗೆಗೆ ಇಲ್ಲವೆ ದ್ರವ್ಯಗಳ ಸಾಂದ್ರೀಕರಣದಲ್ಲಿ ಕಾಣಬರುವ ಒಂದೇ ಬಗೆಯ ದ್ರವ್ಯದ ಉಪಚಯವನ್ನು (ಅಕ್ರೀಷನ್) ಇದು ಗಣನೆಗೆ ತಾರದು. ಆದರೂ ಜೀವಂತ ಮತ್ತು ನಿರ್ಜೀವ ದ್ರವ್ಯಗಳ ನಡುವೆ ಇರುವ ಭೇದದ ಬಗ್ಗೆ ಇದುವರೆಗೆ ಕೊಡಲಾಗಿರುವ ಯಾವ ವಿವರಣೆಯೂ ಸಮರ್ಪಕವಾಗಿಲ್ಲ. ಇಂದಿಗೂ ಜೀವದ ಬಗ್ಗೆ ಎರಡು ವಿರುದ್ಧ ದೃಷ್ಟಿಕೋನಗಳಿವೆ: 1. ಜೀವವೆಂದರೆ ಅನೇಕ ಮೂಲಧಾತುಗಳಿಂದ ಉಂಟಾಗುವ ಬರಿಯ ಒಂದು ರಾಸಾಯನಿಕ ಪ್ರತಿಕ್ರಿಯೆ: ಇದಕ್ಕೆ ಇನ್ಯಾವ ಬಗೆಯ ಮಹತ್ವವೂ ಇಲ್ಲ. 2. ಜೀವ ಗಹನವಾದ ಶಕ್ತಿಯೊಂದರ ರೂಪ. ಎಲ್ಲಾ ದ್ರವ್ಯಗಳಂತೆಯೇ ಇದಕ್ಕೂ ಅಸ್ತಿತ್ವ ಉಂಟು. ಇದು ಜೀವಂತ ವಸ್ತುಗಳಲ್ಲಿ ಮಾತ್ರ ವ್ಯಕ್ತವಾಗುವಂತಿದ್ದು ನಿರ್ಜೀವ ವಸ್ತುಗಳಲ್ಲಿ ಅವ್ಯಕ್ತ ಸ್ಥಿತಿಯಲ್ಲಿ ಇದೆ. ಮೊದಲ ಬಗೆಯ ಸಿದ್ಧಾಂತಗಳೆಲ್ಲ ಭೌತವಾದದ (ವಾಸ್ತವಾತಾವಾದದ) ಗುಂಪಿನವಾದರೆ ಎರಡನೆಯವು ಜೀವಚೈತನ್ಯವಾದದ (ವೈಟಲಿಸಮ್)-ಗುಂಪಿಗೆ ಸೇರಿವೆ. 

ಜೀವಚೈತನ್ಯವಾದದ ಗುಂಪಿನ ಸಿದ್ಧಾಂತಗಳು ಮುಖ್ಯವಾಗಿ ಎರಡು ವಿರುದ್ಧ ವರ್ಗಗಳಿಗೆ ಸೇರುತ್ತವೆ. ಒಂದರಲ್ಲಿ ಜೀವಶಕ್ತಿಯನ್ನು ಒಂದು ನೈಸರ್ಗಿಕ, ಆದರೆ ಅತ್ಯಂತ ಸೂಕ್ಷ್ಮವಾದ ಭೌತ ಬಲವೆಂದು ಕಲ್ಪಿಸಲಾಗಿದೆ. ಇದಕ್ಕೆ ಪರಿಪೂರ್ಣ ಅಂತಃಶಕ್ತಿ (ಎಂಟೆಲೆಕಿ), ಜೀವ ಪ್ರೇರಕ ಶಕ್ತಿ (ಏಲಾನ್ ವೀಟಾಲ್) ಎಂಬ ಹೆಸರುಗಳುಂಟು. ಇನ್ನೊಂದರಲ್ಲಿ ಜೀವಶಕ್ತಿ ಮನೋರೂಪಿಯಾದುದು ಇಲ್ಲವೆ ಚೈತನ್ಯಸ್ವರೂಪಿಯಾದುದು ಎಂದು ಪರಿಭಾವಿಸಲಾಗಿದೆ. ಇದು ಪ್ರತಿಯೊಂದು ಜೀವಿಯಲ್ಲೂ ವ್ಯಕ್ತಿತ್ವ ಗುಣವುಳ್ಳ ಆತ್ಮರೂಪಿಯಾಗಿ ಇರುತ್ತದೆ. ಇಂಥ ಆತ್ಮಗಳು ಸೂಕ್ತವಾದ ದ್ರವ್ಯಗಳ ಚೌಕಟ್ಟಿನೊಳಗಿದ್ದು ಅವನ್ನು ನಿಯಂತ್ರಿಸುತ್ತವೆ. ಈ ದೃಷ್ಟಿಯಿಂದ ಆತ್ಮ ಬೇರೆ, ದೇಹ ಬೇರೆ. ಈ ತೆರನ ದ್ವ್ಯೆತವನ್ನು ಬಹುಶಃ ಕ್ರಿ.ಪೂ. 500ರಲ್ಲಿ ಪೈಥಾಗೊರಸ್ ಪ್ರತಿಪಾದಿಸಿರಬೇಕೆಂದು ಬಗೆಯಲಾಗಿದೆ. ತಾರ್ಕಿಕವಾಗಿ ಈ ವಾದವನ್ನು ಒಪ್ಪಲಾಗುವುದಿಲ್ಲ. ಆದರೆ ಜೀವ ಎಂದರೇನು ಎಂಬ ಪ್ರಶ್ನೆಗೆ ಯಾವ ತರ್ಕಬದ್ಧ ವಿವರಣೆಯನ್ನೂ ಕೊಡಲಾಗುವುದಿಲ್ಲ. ಇದು ನಂಬಿಕೆಯ ಒಳ ಅಭಿಪ್ರಾಯಗಳಿಗೆ ಮಾತ್ರ ಗ್ರಾಹ್ಯವಾಗಿದ್ದು ಇದಕ್ಕೆ ಯಾವ ತೆರನ ಭೌತ ಸಾಕ್ಷ್ಯಗಳನ್ನೂ ಕೊಡಲಾಗುವುದಿಲ್ಲ.

ವಿಜ್ಞಾನದ್ರವ್ಯದ (ಎಲ್ಲಾ ಬಗೆಯ ಭೌತಶಕ್ತಿಗಳನ್ನು ಒಳಗೊಂಡು) ತಿರುಳನ್ನೂ ಸ್ವಭಾವವನ್ನೂ ಅಧ್ಯಯಿಸುತ್ತದೆ. ಜೀವಂತ ವಸ್ತುವಿನ ವೈಜ್ಞಾನಿಕ ಅಧ್ಯಯನವೇ ಜೀವವಜ್ಞಾನ. ಜೀವಂತ ವಸ್ತುವಿನ ವಿಚಿತ್ರ ಸ್ವಭಾವವನ್ನು ಕುರಿತು ಜೀವರಸಾಯನ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಲೇ ಬಂದಿದ್ದಾರೆ. ಫೆಡರಿಕ್ ವೋಹ್ಲರ್ 1828ರಲ್ಲಿ ಮೊಟ್ಟಮೊದಲ ಬಾರಿಗೆ ಯೂರಿಯವನ್ನು ಸಂಶ್ಲೇಶಿಸುವುದರ ಮೂಲಕ ನಿರ್ಜೀವ ವಸ್ತುಗಳಿಗೆ ಅನ್ವಯವಾಗುವ ರಾಸಾಯನಿಕ ನಿಯಮಗಳೇ ಸಾವಯವ ಸಂಯುಕ್ತಗಳಿಗೂ ಅನ್ವಯವಾಗುತ್ತವೆ ಎಂಬುದನ್ನು ಕಂಡುಹಿಡಿದ. ಅಲ್ಲಿಂದೀಚೆಗೆ ಜೀರ್ಣಕ್ರಿಯೆ, ಸ್ರವರ್ಣ, ಕಿಣ್ವ ಮತ್ತು ಚೋದಕಗಳ ಚಟುವಟಿಕೆ, ಸ್ನಾಯು ಹಾಗೂ ನರಗಳ ಕ್ರಿಯೆ ಮುಂತಾದ ಸಾವಯವ ಪ್ರಕ್ರಿಯೆಗಳ ರಾಸಾಯನಿಕ ನಿಯಮಗಳ ಹೆಚ್ಚು ಪರಿಚಯ ಉಂಟಾಗಿದೆ. ಎಲ್ಲ ಜೀವಿಗಳ ಇರವಿಗೆ ಅತ್ಯವಶ್ಯವಾದ ಹಾಗೂ ಮೂಲಭೂತವಾದ ದ್ಯುತಿಸಂಶ್ಲೇಷಣ ಕ್ರಿಯೆಯ ಸ್ಥೂಲ ಪರಿಚಯ ಉಂಟಾಗಿದೆಯಲ್ಲದೆ ಇದರ ಸಂಕೀರ್ಣತೆಯ ಅರಿವೂ ಮೂಡಿದೆ. ಈ ಕ್ರಿಯೆಗೆ ಯಾವ ರೀತಿಯ ಅತೀಂದ್ರಿಯ ಬಲವೂ ಬೇಕಾಗಿಲ್ಲ ಎಂಬುದು ಖಚಿತವಾಗಿದೆ.

ಎಲ್ಲ ಜೀವಂತ ವಸ್ತುಗಳೂ ಕೋಶಗಳೆಂಬ ಘಟಕಗಳಿಂದ ರಚಿತವಾಗಿವೆ. ಒಂದೊಂದು ಕೋಶವೂ ಒಂದು ಸಂಕೀರ್ಣ ರಾಸಾಯನಿಕ ಕಾರ್ಖಾನೆ. ಅದರ ಪ್ರಜನನದಲ್ಲಿ ಬೆಳೆವಣಿಗೆ ಮತ್ತು ವಿಭಜನೆಗಳು ಸೇರಿವೆ. ಪ್ರಜನನದ ರಾಸಾಯನಿಕ ಸ್ವಭಾವವನ್ನು 20ನೆಯ ಶತಮಾನದಲ್ಲಿ ಅಂಶಿಕವಾಗಿ ವಿಶದಪಡಿಸಲಾಗಿದೆ. ಅಂತೆಯೇ ಕೋಶದ ಕರ್ತವ್ಯಗಳ ಪ್ರತ್ಯೇಕೀಕರಣಕ್ಕೆ ಕಾರಣಗಳಾದ ವಸ್ತುಗಳ ಬಗ್ಗೆ, ಜನಕ ಕೋಶದಿಂದಮರಿಕೋಶಕ್ಕೆ ಅನುವಂಶಿಕ ಘಟಕಗಳನ್ನು ಒಯ್ಯುವ ವಸ್ತುಗಳ ಬಗ್ಗೆ ವಿವರಗಳು ಲಭ್ಯವಾಗಿವೆ. ಒಂದೇ ಒಂದು ಅಣುವಿನಲ್ಲಿ ಹತ್ತಾರು ಸಾವಿರ ಪರಮಾಣುಗಳಿರಬಹುದು. ಈ ದೃಷ್ಟಿಯಿಂದ ನೋಡಿದಾಗ ಮೇಲೆ ಹೇಳಿದ ಸಾಧನೆಗಳು ತಾಳ್ಮೆ ನೈಪುಣ್ಯ ಮತ್ತು ಜಾಣತನಗಳ ಪ್ರತೀಕಗಳಾಗಿವೆ. ಅಲ್ಲದೆ ಇತ್ತೀಚೆಗೆ ಜೀವಕೋಶದ ಚಟುವಟಿಕೆಗಳನ್ನು ನಿಯಂತ್ರಿಸುವ ವಸ್ತುಗಳ ಉತ್ಪಾದನಾ ಕ್ರಮವನ್ನು ಅರಿಯುವಲ್ಲಿ ಮಹತ್ಸಾಧನೆಗಳಾಗಿವೆ. ಇಂಥ ನಿಯಂತ್ರಣದಲ್ಲಿ ಭಾಗಿಗಳಾಗುವ ಅನೇಕ ಸಂಯುಕ್ತಗಳನ್ನು ನಿರ್ಜೀವ ವಸ್ತುಗಳಿಂದ ಸಂಶ್ಲೇಷಿಸಲಾಗಿದೆ.

ಏಕಕೋಶಿ ಪ್ರಾಣಿಗಳಲ್ಲಿ (ಪ್ರೀಟೊಜೋóವ) ಇಡೀ ಪ್ರಾಣಿಯೇ ಎರಡಾಗಿ ವಿಭಜಿಸುವುದರ ಮೂಲಕ ಪ್ರಜನನ ನಡೆಯುತ್ತದೆ. ಇದರಿಂದಾಗಿ ಇಂದು ಜೀವಂತವಾಗಿರುವ ಇಂಥ ಪ್ರಾಣಿಗಳು ಅವುಗಳ ಬಹುದೂರದ ಪೂರ್ವಜಗಳ ತುಂಡುಗಳೆಂದೇ ಹೇಳಬಹುದು. ಎಲ್ಲ ಪ್ರಾಣಿ ಪ್ರಭೇದಗಳ ವಿಶಿಷ್ಟ ಪ್ರಜನನ ಕೋಶಗಳಿಗೂ ಇದೇ ಬಗೆಯ ಇತಿಹಾಸವುಂಟು. ಮತ್ತು ಅಷ್ಟರ ಮಟ್ಟಿಗೆ ಇವು ಅಮರಜೀವಿಗಳು-ಆದರೆ ಇಂಥ ಜೀವಿಗಳ ಉಳಿದ ಕೋಶಗಳು ಮಾತ್ರ ಕಟ್ಟಕಡೆಗೆ ಸತ್ತುಹೋಗುತ್ತವೆ.

ಜೀವಂತ ವಸ್ತುಗಳು ತಮಗೆ ತಾವೇ ನಿರ್ಜೀವ ವಸ್ತುವಿನಿಂದ ಸೂಕ್ತ ಪರಿಸ್ಥಿತಿ ಒದಗಿದರೆ, ಹುಟ್ಟುತ್ತವೆ ಎಂದು ಹಿಂದೆ ಭಾವಿಸಲಾಗಿತು. ಈವಾದಕ್ಕೆ ತಕ್ಕ ರುಜುವಾತುಗಳನ್ನು ಒದಗಿಸಲಾಗಿತ್ತು. ಆದರೆ ಇವು ತಪ್ಪೆಂದು ತೋರಿಸಿದವ ಲೂಯಿ ಪಾಸ್ತರ್. ರೂಡಾಲ್ಫ್ ಫಿರ್ಕಾಫ್ ಎಂಬಾತ ತನ್ನ ಪ್ರಸಿದ್ಧ ನಿಯಮ `ಆಮ್ನಿಸ್‍ಸೆಲ್ಯುಲ ಈ ಸೆಲ್ಯುಲ ಎಂಬುದರಲ್ಲಿ ಜೀವಂತ ಕೋಶಗಳು ಇತರ ಕೋಶಗಳಿಂದ ಮಾತ್ರ ಉತ್ಪತ್ತಿಯಾಗಬಲ್ಲವು ಎಂದು ಸಾರಿದ. ಇದರಿಂದಾಗಿ ಭೂಮಿಯ ಮೇಲೆ ಜೀವ ಹೇಗೆ ಉಗಮಿಸಿತು ಎಂಬ ಪ್ರಶ್ನೆ ಹಾಗೆಯೇ ಉಳಿಯಿತು. ಇದಕ್ಕೆ ಎರಡು ಬಗೆಯ ಸಿದ್ಧಾಂತಗಳು ಪ್ರತಿಪಾದಿತವಾಗಿದೆ. ಒಂದರ ಪ್ರಕಾರ ಹೊಸದಾಗಿ ತಂಪಾದ ಭೂಗ್ರಹದಲ್ಲಿ ಇದ್ದ ಅಸಾಧಾರಣ ಪರಸ್ಥಿತಿಗಳಲ್ಲಿ ರಾಸಾಯನಿಕ ಕ್ರಿಯೆಗಳು ನಡೆದು ಜೀವ ಉದ್ಭವಿಸಿತು. ಎರಡನೆಯ ಸಿದ್ಧಾಂತದ ಪ್ರಕಾರ ಹೊರಗಿನ ಯಾವುದೋ ಗ್ರಹದಲ್ಲಿ ಜೀವ ಉದ್ಭವಿಸಿ ಅಲ್ಲಿಂದ ಆಕಾಶದ ಮೂಲಕ ಸಣ್ಣಕಣಗಳ ರೂಪದಲ್ಲಿ ಸಾಗಿಬಂದು ಭೂಮಿಯನ್ನು ಸೇರಿತು. ಈ ವಾದದ ಮೂಲಪ್ರತಿಪಾದಕನಾದ ಎಸ್.ಎ.ಅರೀನಿಯಸ್ ಈ ಜೀವದ ಕಣಗಳನ್ನು ಪ್ಯಾನ್‍ಸ್ಟರ್ಮಿಯ ಎಂದು ಕರೆದ. ಇವೆರಡು ಸಿದ್ಧಾಂತಗಳು ವಿರೋಧಾತ್ಮಕವಲ್ಲ, ಏಕೆಂದರೆ ಪ್ಯಾನ್‍ಸ್ಪರ್ಮಿಯಗಳು ಭೂಮಿಯ ಮೇಲೆ ಉದ್ಭವಿಸದಿದ್ದಲ್ಲಿ ರಾಸಾಯನಿಕ ಕ್ರಿಯೆಗಳ ಫಲವಾಗಿ ಇನ್ನೆಲ್ಲಾದರೂ ಹುಟ್ಟಿರಬೇಕು. ಹೀಗೆ ಉದ್ಭವಿಸಿದ ಕಣಗಳು ಆಕಾಶದ ಮೂಲಕ ಸಾಗಿಬರುವುದೇನೂ ವೈಜ್ಞಾನಿಕ ದೃಷ್ಟಿಯಲ್ಲಿ ಸಮಸ್ಯೆಯಲ್ಲ. ಏಕೆಂದರೆ ಅತ್ಯಂತ ವ್ಯವಸ್ಥಿತರೂಪದ ಜೀವಂತ ಕೋಶಗಳು ಕೂಡ ದ್ರವ ವಾಯುವಿನ ಉಷ್ಣತೆಗಿಂತಲೂ ಕಡಿಮೆ ಉಷ್ಣತೆಯಲ್ಲಿ ಜೀವಂತವಾಗಿರಬಲ್ಲವು ಮತ್ತು ಟಾರ್ಡಿಗ್ರೇಡ ಗುಂಪಿನ ಪ್ರಾಣಿಗಳು ಸಂಪೂರ್ಣಶೋಷಣೆ ಮತ್ತು ಅತಿಶೀತೀಕರಣದ ಅನಂತರವೂ ಪುನಶ್ಚೈತನ್ಯಗೊಳ್ಳಬಲ್ಲವು. ಅಲ್ಲದೆ ಕೆಲವು ತೆರನ ಉಲ್ಕೆಗಳಲ್ಲಿ ಸಾವಯವ ಪದಾರ್ಥಗಳಿರುವುದು ಕಂಡುಬಂದ ಮೇಲೆ (1950)ಭೂಮಿಗೂ ಆಚೆ ಜೀವ ಇದೆಯೆಂಬ ವಾದಕ್ಕೆ ಪುಷ್ಟಿ ದೊರೆಯಿತು. ಆದರೆ ಭೂಮಿಯಲ್ಲಿ ಆಳವಾಗಿ ಹುದುಗಿರುವ ಶಿಲೆಗಳಲ್ಲಿ ಈ ತೆರನ ರಾಸಾಯನಿಕಗಳು ಇಲ್ಲ ಎಂಬುದು ಈ ವಾದದ ಬಗ್ಗೆ ಸಂದೇಹವನ್ನು ಬೀರಿದೆ. ಜೀವಂತ ವಸ್ತುವಿನ ಸಂಕೀರ್ಣ ಪದಾರ್ಥಗಳು ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಉದ್ಭವಿಸಿ ಅನಂತರ `ಜೀವದ ಗುಣಗಳನ್ನು ಪ್ರದರ್ಶಿಸುವ ಘಟಕಗಳಾಗಿ ಒಂದುಗೂಡಿದವೇ ಎಂಬುದು ನಿರ್ಣಾಯಕ ಸಮಸ್ಯೆಯಾಗಿ ಉಳಿಯುತ್ತದೆ. ಇಂಥ ಆಗುವಿಕೆಗೆ ಪ್ರತಿಕೂಲವಾದ ಸಂದರ್ಭಗಳು ಅತ್ಯಂತ ಪ್ರಬಲವಾಗಿದ್ದವೆಂಬ ಭಾವನೆ ಇದೆ. ಆದರೆ ಸಾಕಷ್ಟು ವಿಸ್ತಾರವಾದ ಪ್ರಯೋಗಾಲಯ ಮತ್ತು ಕಾಲಾವಧಿಗಳನ್ನು ಕೊಟ್ಟರೆ-ಇವೆರಡನ್ನೂ ವಿಶ್ವ ಒದಗಿಸಬಲ್ಲದು-ಈ ಪ್ರತಿಕೂಲ ಸಂದರ್ಭಗಳು ತೀರ ಸಣ್ಣವಾಗಿಬಿಡುತ್ತವೆ.

ಮೊತ್ತಮೊದಲಿಗೆ, ಅಂದರೆ ಸುಮಾರು 3,000 ಮಿಲಿಯನ್ ವರ್ಷಗಳ ಹಿಂದೆ, ಭೂಮಿಜೀವಕ್ಕೆ ಆಸರೆಯೀಯುವಷ್ಟು ತಣ್ಣಗಾದಾಗ ಅದರ ವಾತಾವರಣದಲ್ಲಿ ಮುಖ್ಯವಾಗಿ ಹೈಡ್ರೊಜನ್, ಮೀಥೇನ್, ಅಮೋನಿಯ, ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನ ಆವಿ ಮಾತ್ರ ಇದ್ದವೆಂದು ಭಾವಿಸಲಾಗಿದೆ. ಆಕ್ಸಿಜನ್ ಇರಲೇಇಲ್ಲ. ಇದ್ದರೂ ಅತ್ಯಲ್ಪ ಮೊತ್ತದಲ್ಲಿತ್ತು. ಇಂಥ ವಾತಾವರಣ, ಖನಿಜಲವಣಯುಕ್ತ ಬಿಸಿಸಾಗರದಲ್ಲಿ ಕರಗಿ ಅನೇಕ ಬಗೆಯ ಸಾವಯವ ಸಂಯುಕ್ತಗಳನ್ನು ಉತ್ಪಾದಿಸಿರಬೇಕೆಂದು ರಷ್ಯದ ವಿಜ್ಞಾನಿ ಏ.ಐ.ಒಪಾರಿನ್ ಪರಿಭಾವಿಸಿದ (1923). ಈತನ ಪ್ರಕಾರ ಸೂರ್ಯನಿಂದ ಬರುವ ಬೆಳಕು ಮತ್ತು ಅತಿನೇರಿಳೆ ವಿಕಿರಣ ರೂಪದ ಶಕ್ತಿಯ ಫಲವಾಗಿ ಅಮೈನೋ ಆಮ್ಲ, ಯೂರಿಯ, ಮಾನೊಕಾರ್ಬಾಕ್ಸಿಲಿಕ್ ಮತ್ತು ಡೈಕಾರ್ಬಾಕ್ಸಿಲಿಕ್ ಆಮ್ಲಗಳ ಮಿಶ್ರಣ ರೂಪುಗೊಳ್ಳಬಹುದು. ಜೆ.ಬಿ.ಎಸ್.ಹಾಲ್ಡೇನ್ ಹೆಚ್ಚು ಕಡಿಮೆ ಇದೇ ಭಾವನೆಯನ್ನು ವ್ಯಕ್ತಪಡಿಸಿದ (1928). ಈ ಪ್ರಕ್ರಿಯೆಯನ್ನು ಅಮೆರಿಕದಲ್ಲಿ ಸ್ಟ್ಯಾನ್ಲಿ ಮಿಲರ್ ಎಂಬಾತ ಯಶಸ್ವಿಯಾಗಿ ಅನುಕರಿಸಿದ್ದಾನೆ (1953). ಆಧುನಿಕ ಜೀವಂತ ವಸ್ತುವಿನ ಕೆಲವು ಮೂಲ ಘಟಕಗಳು ಈ ಪದಾರ್ಥಗಳು. ಇತ್ತೀಚೆಗೆ ಸರಳ ಪ್ರೋಟೀನುಗಳು ಮತ್ತು ಎ.ಟಿ.ಪಿ-ಇವನ್ನು ಕೂಡ ಇದೇ ಬಗೆಯಲ್ಲಿ ಪ್ರಾಚೀನ ಪರಿಸ್ಥಿತಿಗಳಲ್ಲಿ ಸಂಶ್ಲೇಷಿಸಲಾಗಿದೆ. ಭೂಮಿಯ ಮೇಲೆ ಜೀವದ ಉಗಮಕ್ಕೆ ಅಗತ್ಯವಾದ ಕ್ರಿಯೆಗಳು ಕಬ್ಬಿಣ, ತಾಮ್ರ ಮತ್ತು ಮೆಗ್ನೀಷಿಯಮ್ ಖನಿಜಗಳು ಇರುವಂಥ ಜೇಡಿಯ ಕಣಗಳವೇಗೋತ್ಕರ್ಷಕ ಮೇಲ್ಮೈಗಳ ಮೇಲೆ ನಡೆದಿರಬಹುದು. ಇದರಿಂದ ಉಂಟಾದ ಘಟಕಗಳು ಅನಂತರ ಬಿಸಿನೀರಿನಲ್ಲಿ ಪೆಪ್ಟೈಡುಗಳು, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ಬಹುಶಃ ಕಾರ್ಬೊಹೈಡ್ರೇಟುಗಳಾಗಿ ಪಾಲಿಮರೀಕರಣವಾಗಿರಬಹುದು. ಭೂಮಿಯ ವಯಸ್ಸಿಗೆ ಹೋಲಿಸಿದಂತೆ ಬಹುಸ್ವಲ್ಪ ವೇಳೆಯಲ್ಲಿ-ಅಂದರೆ ಸುಮಾರು ಒಂದು ಮಿಲಿಯನ್ ವರ್ಷಗಳಲ್ಲಿ-ಶಕ್ಯವಾಗುವ ಎಲ್ಲ ಬಗೆಯ ಸಂಯುಕ್ತಗಳೂ ಸಾಕಷ್ಟು ಪರಿಮಾಣಗಳಲ್ಲಿ ಉತ್ಪತ್ತಿಯಾಗಿರಬೇಕು. ದೊಡ್ಡ ಪಾಲಿಮರುಗಳು ಸಣ್ಣ ಸಣ್ಣಗೋಳಗಳಾಗಿ ವಿಭಾಗವಾಗಿ ಲೀನವಸ್ತುಗಳ ತೆಳುದ್ರಾವಣದಲ್ಲಿ ನಿಲಂಬಿತವಾಗಿರಬೇಕು. ಇವೆಲ್ಲ ಒಟ್ಟುಗೂಡಿ ಕಲಿಲವಾಗಿರಬೇಕು. ಅನಂತರ ಗೋಳಗಳು ನೀರಿನಿಂದ ಲವಣಗಳನ್ನೂ ಮತ್ತಿತರ ವಸ್ತುಗಳನ್ನೂ ಹೀರಿಕೊಂಡು ಬೆಳೆಯಲು ಪ್ರಾರಂಭಿಸಿರಬೇಕು. ಹೀಗೆ ಗೋಳಗಳೊಳಗೆ ಹೊಸ ಹೊಸ ರಾಸಾಯನಿಕಗಳು ಸೇರಿದಂತೆ ಅವುಗಳ ಸಾಮೀಪ್ಯದಿಂದಾಗಿ ಹೊಸ ಸಂಯುಕ್ತಗಳು ಉತ್ಪತ್ತಿಯಾಗಿರಬೇಕು. ಗೋಳಗಳು ಕ್ರಮೇಣ ಯಾವುದೋ ಒಂದು ನಿರ್ದಿಷ್ಟ ಗಾತ್ರಕ್ಕೆ ಬೆಳೆದ ಬಳಿಕ ತದ್ವತ್ತಾದ ಎರಡು ಕಿರುಗೋಳಗಳಾಗಿ ವಿಭಾಗವಾಗಿರಬಹುದು. ಇವು ಮತ್ತೆ ಮತ್ತೆ ಹೊಸ ಪದಾರ್ಥವನ್ನು ಹೀರಿಕೊಂಡು, ಹೊಸ ಅಣುಗಳನ್ನು ಉತ್ಪಾದಿಸಿ ಕಬ್ಬಿಣ, ನಿಕಲ್ ಮುಂತಾದ ಸೂಕ್ತಬಗೆಯ ವೇಗವರ್ಧಕಗಳ ನೆರವಿನಿಂದ ಆದಿ ಕಿಣ್ವಗಳನ್ನು ತಯಾರಿಸಿರಬಹುದು. ಅದೇ ಕಾಲಕ್ಕೆ ಅಥವಾ ಕೊಂಚ ಕಾಲದ ನಂತರ ಪರಸ್ಪರಾವಲಂಬಿಗಳಾದ ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ಪ್ರೋಟೀನುಗಳು ಹುಟ್ಟಿಕೊಂಡು ಡಿಎನ್‍ಎ-ಆರ್‍ಎನ್‍ಎ-ಪ್ರೋಟೀನು ಸಂಕೀರ್ಣದ ಹುಟ್ಟಿಗೆ ಕಾರಣವಾಗಿರಬೇಕು. ಈ ಸಂಕೀರ್ಣವೇ ಎಲ್ಲ ಬಗೆಯ ಜೀವಿಗಳ ಗುಣಲಕ್ಷಣಗಳ ಆನುವಂಶಿಕ ಸಂಪ್ರೇಕ್ಷಣೆಗೆ ಕಾರಣಭೂತವಾದ ವಸ್ತು.

ಅನಂತಕಾಲದಿಂದ ಸಂಗ್ರಹಗೊಂಡ ಈ ಅಗಾಧ ಮೊತ್ತದ ಕಚ್ಚಾವಸ್ತ್ತುಗಳಲ್ಲಿ ಜೀವದ ಉಗಮಕ್ಕೆ ಆವಶ್ಯಕವಾದ ವಸ್ತುಗಳು ಉತ್ಪತ್ತಿಯಾಗಲಿಲ್ಲವೆಂದರೆ ನಂಬಲು ಅಸಾಧ್ಯವಾಗುತ್ತದೆ. ಈ ಉತ್ಪತ್ತಿಕೇವಲ ಕೆಲವೇ ಸಲ-ಬಹುಶಃ ಒಂದೇ ಸಲ-ನಡೆದಿರಬಹುದು. ಆದ್ದರಿಂದ ಭೂಮಿಯ ಅಂದಿನ ವಾತಾವರಣದಲ್ಲಿ ಇಂಥ ರಾಸಾಯನಿಕ ಕೋಶಗಳ ಉದ್ಭವ ಆಯಿತು ಎಂದರೆ ಆಶ್ಚರ್ಯವಾಗುವ ಬದಲು ಆಗಲಿಲ್ಲ ಎಂಬುದು ಹೆಚ್ಚು ಅಚ್ಚರಿಯ ಸಂಗತಿಯಾದೀತು. ಒಂದು ಸಲ ಈ ಉಗಮ ನಡೆದ ಮೇಲೆ ವಿಕಾಸದ ತತ್ವಗಳು ಕಾರ್ಯಗತವಾಗಿ ಅತ್ಯುತ್ತಮ ರೂಪಗಳ ಆಯ್ಕೆ ನಡೆಯಲಾರಂಭಿಸಿತು. ಲಭ್ಯವಿದ್ದ ಎಲ್ಲ ಕಚ್ಚಾವಸ್ತುಗಳು ಸಂಪೂರ್ಣವಾಗಿ ವ್ಯಯವಾಗತೊಡಗಿದ ಮೇಲೆ ಶಕ್ತಿಯ ನಿರವಯವ ಮೂಲವಸ್ತುಗಳನ್ನು ಬಳಸಿಕೊಂಡು ಸಾವಯವ ಅಣುಗಳನ್ನು ಕಟ್ಟುವ ರಚನೆಗಳು ಹುಟ್ಟಿಕೊಂಡಿರಬೇಕು. ಈ ತೆರನ ವಿಕಾಸ ಮುಂದುವರಿದು ದ್ಯುತಿಸಂಶ್ಲೇಷಣಕ್ರಿಯೆ ಕಾಣಿಸಿಕೊಂಡು ಪಾಚಿಸಸ್ಯಗಳ ಪೂರ್ವಜ ಸಸ್ಯಗಳಾದ ಕೆಲವು ಏಕಕೋಶಿ ಸಸ್ಯಗಳ ಉಗಮವಾಗಿರಬೇಕು. ದ್ಯುತಿಸಂಶ್ಲೇಷಣೆಯ ಮೂಲಕ ವಾತಾವರಣದಲ್ಲಿ ಆಕ್ಸಿಜನ್ ಪೂರೈಕೆ ಪ್ರಾರಂಭವಾಗಿರಬೇಕು. ಅನಂತರ ಕಾರ್ಬನ್ ಚಕ್ರ ಮುಂತಾದ ಸ್ವನಿಯಂತ್ರಣ ಚಕ್ರಗಳು ಆರಂಭವಾಗಿರಬೇಕು.

ಮೇಲೆ ಹೇಳಿದ್ದು ಒಪಾರಿನ್ ಪ್ರತಿಪಾದಿಸಿದ ವ್ಯವಸ್ಥೆಯ ಸ್ಥೂಲಚಿತ್ರ. ಆದರೆ ಇದರಲ್ಲಿ ಪರಿಹರಿಸಲಾಗದ ಅನೇಕ ಸಮಸ್ಯೆಗಳುಂಟು. ಉದಾಹರಣೆಗೆ, ಪ್ರೋಟೀನಿನ ಬೃಹದಣುಗಳು ಹೇಗೆ ರಚಿತವಾದುವು ಎಂಬುದು ಇಂಥ ಸಮಸ್ಯೆಗಳಲ್ಲೊಂದು. ಅಲ್ಲದೆ ಇಂದು ಜೀವಂತ ವ್ಯವಸ್ಥೆಗಳ ಹೊರಗೆ ಸಾವಯವ ಸಂಯುಕ್ತಗಳು ಇಲ್ಲದಿರುವ ಬಗ್ಗೆಯೂ ಈ ಪ್ರತಿಪಾದನೆ ಮೌನವಾಗಿದೆ. ಆದರೆ ತಂಬಾಕು ಗಿಡದ ಶಬಲ ವೈರಸ್ಸಿನಂಥಹ ಸಂದಿಗ್ಧರೂಪದ ಜೀವಿಗಳಿವೆಯೆಂಬುದನ್ನು ಅಲ್ಲಗಳೆಯಲಾಗದು. ದೈತ್ಯ ಅಣುವಿಗಿಂತ ಕೊಂಚ ದೊಡ್ಡದಾಗಿರುವ ಇದನ್ನು ಉಪ್ಪು ಅಥವಾ ಸಕ್ಕರೆಯಂತೆ ಸ್ಪಟಕೀಕರಿಸಬಹುದು. ಆದರೂ ಒಪಾರಿನ್ ಮಂಡಿಸಿದ ವ್ಯವಸ್ಥೆ ತತ್ವಶಃ ಸಂಭವನೀಯವಾದ್ದು; ಸ್ಥಿರೀಕೃತ ರಾಸಾಯನಿಕ ಮತ್ತು ಭೌತನಿಯಮಗಳನ್ನು ಇದು ಬಳಸುತ್ತದೆ.

ಜೀವಂತ ವ್ಯವಸ್ಥೆಗಳಲ್ಲಿ ಕಂಡುಬರುವ ಪದಾರ್ಥಗಳೆಲ್ಲವೂ ಹೆಚ್ಚು ಕಡಿಮೆ ಕಾರ್ಬನ್ ಸಂಯುಕ್ತಗಳೇ. ಕಾರ್ಬನ್ ಪರಮಾಣುವಿನ ಅಸಾಮಾನ್ಯ ಬಹುಮುಖ ಸಾಮಥ್ರ್ಯ ಕಾರ್ಬನ್ ಸಂಯುಕ್ತಗಳ ರೂಪವೈವಿಧ್ಯಕ್ಕೆ ಕಾರಣವಾಗಿದೆ. ಒಂದು ಕಾರ್ಬನ್ ಅಣು ಬೇರೆ ಕಾರ್ಬನ್ ಅಣುಗಳೊಂದಿಗೇ ಅಲ್ಲದೆ ಬೇರೆ ಅಣುಗಳೊಂದಿಗೆ, ಪರಮಾಣುಗಳೊಂದಿಗೆ, ಇನ್ನೂ ದೊಡ್ಡ ಪರಮಾಣು ವ್ಯವಸ್ಥೆಗಳೊಂದಿಗೆ ಕೂಡಿಕೊಂಡು ಉಂಗುರಗಳಾಗಿ, ಅಮಿತ ಉದ್ದದ ಸರಪಳಿಗಳಾಗಿ ರೂಪುಗೊಳ್ಳಬಲ್ಲದು. ಇದಕ್ಕೆ ಅವಶ್ಯಕವಾದ ಕ್ರಿಯೆಗಳು ಉಷ್ಣತೆಯ ಅಲ್ಪ ವ್ಯಾಪ್ತಿಯಲ್ಲಿ ಹಾಗೂ ನೀರಿನ ಸಮ್ಮುಖದಲ್ಲಿ ಮಾತ್ರ ನಡೆಯಬಲ್ಲವು. ಭೂಮಿಯೊಂದೇ ಇದುವರೆಗೆ ತಿಳಿದಿರುವಂತೆ, ಇಂಥ ಪರಿಸ್ಥಿತಿಗಳನ್ನು ಒದಗಿಸಬಲ್ಲ ಏಕೈಕ ಸ್ಥಳವಾಗಿದೆ. ಆಕಾಶದಲ್ಲಿ 24 ದಶಲಕ್ಷ ಕೋಟಿ ಮೈಲುಗಳ ದೂರದ ವರೆಗೆ ಇಂಥಹ ಪರಿಸ್ಥಿತಿಯಿರಬಹುದಾದ ಗ್ರಹ ಇನ್ನೊಂದಿಲ್ಲ ಎಂದು ಹೇಳಲಾಗಿದೆ. ಆದರೆ ವಿಶ್ವದ ಅಗಾಧತೆಯನ್ನು ಗಣನೆಗೆ ತೆಗೆದುಕೊಂಡರೆ ಭೂಮಿ ಅದ್ವಿತೀಯವಾದುದೇನೂ ಅಲ್ಲ; ಬಹುಶಃ ಭೂಮಿಯಂಥ ಹಲವಾರು ಕೋಟಿ ಗ್ರಹಗಳು ಇರಬಹುದೆಂದು ಊಹಿಸಲಾಗಿದೆ. ರಾಸಾಯನಿಕವಾಗಿ ಭೂಮಿಯ ಮೇಲಿರುವ ಜೀವವನ್ನು ಹೋಲುವ ಜೀವ ಇಂಥ ಕೆಲವು ಬಹುದೂರದ ಗ್ರಹಗಳಲ್ಲಿರಬಹುದು. 

ಭೂಮಿಯ ಮೇಲೆ ವಾಸಿಸುವ ಕೆಲವು ಜೀವಿಗಳು ಮಾನವ ಸಹಿಸಲಸಾಧ್ಯವಾದ ಉಷ್ಣತೆಯ ಏರಿಳಿತಗಳನ್ನು ಸಹಿಸಬಲ್ಲವು. ಕೆಲವು ಬ್ಯಾಕ್ಟೀರಿಯಗಳು ನೀರಿನ ಕುದಿಬಿಂದುವಿಗಿಂತಲೂ 35ºಛಿ ಯಷ್ಟು ಹೆಚ್ಚು ಉಷ್ಣತೆಯನ್ನು ತಡೆದುಕೊಳ್ಳಬಲ್ಲವಾದರೆ ಕೆಲವು ಪಾಚಿಗಳು-230ಲಿ ಸೆಂ ಉಷ್ಣತೆಯುಳ್ಳ ದ್ರವವಾಯುವಿನಲ್ಲಿ ಸುಮಾರು 6 ವರ್ಷಗಳ ಕಾಲ ಬದುಕಿದ್ದ ದಾಖಲೆಗಳಿವೆ. ಜೀವಿಸಲು ನೀರು ಬಲು ಮುಖ್ಯ ಎಂದು ಗಣಿಸಲಾಗಿದ್ದರೂ ಸಹಾರಾ ಮರುಭೂಮಿಯ ಬಿಸಿಲಿನಲ್ಲಿ ಶಾಶ್ವತವಾಗಿ ಬೇಯುತ್ತಿರುವ ಮರಳಿನ ಕಣಗಳ ಮೇಲೆ ಬ್ಯಾಕ್ಟೀರಿಯಗಳಿರುವುದು ಕಂಡುಬಂದಿದೆ. ಕೆಲವು ಬ್ಯಾಕ್ಟೀರಿಯಗಳು ಕುದಿಬಿಂದುವಿಗಿಂತ ಕೇವಲ 10º ಕಡಿಮೆ ಉಷ್ಣತೆ ಇರುವ ಬಿಸಿನೀರಿನ ಬುಗ್ಗೆಗಳಲ್ಲಿ ಬದುಕಿದ್ದರೆ ಇನ್ನು ಕೆಲವು ಟಸ್ಕನಿಯ ಪೂತಿನಾಶಕ ಬುಗ್ಗೆಗಳಲ್ಲಿ ಜೀವಿಸುತ್ತವೆ. ಇಲ್ಲಿನ ಬಿಸಿನೀರು ಬೋರಿಕ್ ಆಮ್ಲದ ಸಾಂದ್ರದ್ರಾವಣ. ಪೆಟ್ರೋಲಿಯಮ್ ಸಯನೈಡ್ ಮುಂತಾದವನ್ನು ಸೇವಿಸಿ, ಬದುಕುವ ಕೀಟಗಳುಂಟು. ಚದರ ಅಂಗುಲಕ್ಕೆ ಒಂದು ಟನ್ನಿಗಿಂತಲೂ ಹೆಚ್ಚು ಒತ್ತಡವಿರುವ ಕಡಲಿನ ಆಳಗಳಲ್ಲೂ ಅತ್ಯುನ್ನತ ಪರ್ವತಶಿಖರಗಳಲ್ಲೂ ಜೀವಿಗಳ ವಾಸ್ತವ್ಯ ಉಂಟು. 23000' ಗಳ ಎತ್ತರದಲ್ಲಿ ಜೇಡಗಳೂ 26000'ಗಳ ಎತ್ತರದಲ್ಲಿ ಹಕ್ಕಿಗಳೂ ಕಂಡುಬಂದಿವೆ. ಭೂಮಿಯ ಮೇಲೆ ಜೀವಿಗಳಿಲ್ಲದ ನೆಲೆಯೇ ಇಲ್ಲವೆಂದು ಹೇಳಬಹುದು.

ಭೂಮಿಯನ್ನು ಬಿಟ್ಟು ಸೌರವ್ಯೂಹದ ಉಳಿದ ಗ್ರಹಗಳಲ್ಲಿ ಜೀವವಿದೆಯೆಂಬ ವಾದಕ್ಕೆ ಅತ್ಯಂತ ಜನಪ್ರಿಯ ಅಭ್ಯರ್ಥಿ ಕುಜಗ್ರಹ. ಒಂದಲ್ಲ ಒಂದು ರೀತಿಯ ನಿಮ್ನ ಜಾತಿಯ ಸಸ್ಯಸಂಪತ್ತು ಇಲ್ಲಿ ಇದೆ ಎಂದು 1965ಕ್ಕೂ ಮುಂಚೆ ನಂಬಲಾಗಿತ್ತು. ಕುಜಗ್ರಹದಲ್ಲಿ ನೀರು ಅತ್ಯಲ್ಪ ಪ್ರಮಾಣದಲ್ಲಿದೆ. ಆಕ್ಸಿಜನ್ ಹೆಚ್ಚಾಗಿಲ್ಲದ ಅಲ್ಲಿನ ವಾತಾವರಣ ತೆಳುವಾಗಿದೆ. ಆದರೆ ಕುಜಗ್ರಹದಲ್ಲಿ ಜೀವಿಗಳಿರುವ ವಿಚಾರವಾಗಿ ಯಾವ ಸ್ಪಷ್ಟ ಪುರಾವೆಯೂ ಅಮೆರಿಕ ಸಂಯುಕ್ತಸಂಸ್ಥಾನ 1965ರಲ್ಲಿ ಹಾರಿಸಿದ ಮ್ಯಾರಿನರ್ Iಗಿ ರಿಂದ ದೊರೆಯಲಿಲ್ಲ. ಕುಜಗ್ರಹ ಚಂದ್ರನಂತೆಯೇ ಜೀವದ ಇರವಿಗೆ ಪ್ರತಿಕೂಲವಾಗಿದೆಯೆಂಬ ಭಾವನೆಯನ್ನು ಈಗ ತಳೆಯಲಾಗಿದೆ. ಆದರೂ ಅಲ್ಲಿನ ನೆಲದ ಮೇಲ್ಮೈಯ ತಳದಲ್ಲಿ ಜೀವಿಗಳಿರಬಹುದೆಂಬ ನಂಬಿಕೆಯೂ ಇತ್ತು. ಆದರೆ ಮ್ಯಾರಿನರ್ II ಆಕಾಶನೌಕೆಯ ಅನ್ವೇಷಣೆಯಿಂದಾಗಿ (1962) ಶುಕ್ರಗ್ರಹದ ಮೇಲ್ಮೈ ಉಷ್ಣದಿಂದ ದ್ರವವಾಗಿರುವ ಸೀಸಕ್ಕಿಂತಲೂ ಬಿಸಿಯಾಗಿದೆ ಎಂದು ಗೊತ್ತಾಗಿದೆ. ಇದರಿಂದ ಇಲ್ಲೂ ಜೀವವಿರಲು ಸಾಧ್ಯವಿಲ್ಲ. ಕಾರ್ಬನ್ ಸಂಯುಕ್ತಗಳಿಂದ ಕೂಡಿದ ಜೀವಿಗಳು ಶುಕ್ರಗ್ರಹದಲ್ಲಿರಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಆದರೆ ಬೇರೆ ರಾಸಾಯನಿಕ ಧಾತು ಕಾರ್ಬನಿನಂತೆ ಜೈವಿಕ ರಾಸಾಯನಿಕ ಸಂಯುಕ್ತಗಳ ಮೂಲವಸ್ತುವಾಗಬಲ್ಲುದೇ ಎಂಬುದರ ಬಗ್ಗೆ ಸೈದ್ಧಾಂತಿಕ ಅನ್ವೇಷಣೆಗಳು ನಡೆದಿವೆ. ಕಾರ್ಬನ್ ಬೇರೆ ಧಾತುಗಳೊಂದಿಗೆ ಹೊಂದಿಕೊಳ್ಳಬಲ್ಲಷ್ಟು ಸಲೀಸಾಗಿ ವೈವಿಧ್ಯಪೂರ್ಣವಾಗಿ ಬೇರಾವ ಧಾತುವೂ ಹೊಂದಿಕೊಳ್ಳಲಾರದು. ಆದರೂ ಸರಿ ಸುಮಾರಾಗಿ ಕಾರ್ಬನನ್ನು ಹೋಲುವ ಧಾತು ಎಂದರೆ ಸಿಲಿಕಾನ್. ಬಹುಶಃ ಇದು ಉಷ್ಣತೆಯ ಪರಿಸ್ಥಿತಿಗಳಲ್ಲಿ ಕಾರ್ಬನಿನಂತೆಯೇ ಕಾರ್ಯವೆಸಗಬಲ್ಲದು. ಪ್ರಸಿದ್ಧ ವಿಜ್ಞಾನಿ ಜೆ.ಬಿ.ಎಸ್ ಹಾಲ್ಡೇನ್ ಇಂಥ ಸಿಲಿಕಾನ್ ಮಾನವರನ್ನು ಸೃಷ್ಟಿಸುವ ಬಗ್ಗೆ ಆಲೋಚಿಸಿದ್ದ. ಇದೇ ರೀತಿ ಕಾರ್ಬನ್ ಮೂಲವುಳ್ಳ ಜೀವವಸ್ತುಗಳ ಬದಲಿಗೆ ಬೇರೆ ರಾಸಾಯನಿಕಗಳಿಂದ ಉದ್ಭವಿಸಬಹುದಾದ ಜೀವಿಗಳ ಬಗ್ಗೆಯೂ ಊಹಾಪೋಹಗಳು ನಡೆದಿವೆ.
(ಎ.ಎಸ್.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ